ಸೇನವಂಶ
	ಬಂಗಾಲದ ಪ್ರಸಿದ್ಧ ರಾಜವಂಶ ಸುಮಾರು ಮೂರು ಶತಮಾನಗಳ ಕಾಲ ಬಂಗಾಲದಲ್ಲಿ ಆಳಿಕೆ ನಡೆಸಿ ಸಾಂಸ್ಕøತಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕ ಕ್ಷತ್ರಿಯ, ಬ್ರಹ್ಮಕ್ಷತ್ರಿಯ, ಕ್ಷತ್ರಿಯ ಎಂದು ತಮ್ಮನ್ನು ಕರೆದುಕೊಂಡಿರುವ ಇವರು ಕರ್ನಾಟಕ ಮೂಲದ ಧಾರವಾಡ ಜಿಲ್ಲೆಯವರು. ಜೈನ ಮತಾವಲಂಬಿಗಳಾಗಿದ್ದ ಇವರು ಹನ್ನೊಂದನೆಯ ಶತಮಾನದಲ್ಲಿ ಪಾಲರು ಕ್ಷೀಣಿಸಿದಾಗ ತಮ್ಮ ಪ್ರಭುತ್ವ ಸ್ಥಾಪಿಸಿದರು. ವೀರಸೇನ ಈ ಸಂತತಿಯ ಮೂಲ ಪುರುಷ. ಸಮಂತಸೇನ ಈ ಸಂತತಿಯ ಮೊದಲ ದೊರೆ. ರಾಧ ಇವರ ರಾಜಧಾನಿಯಾಗಿತ್ತು. ದೊರೆ ಹೇಮಂತಸೇನ ಮಹಾರಾಜಾಧಿರಾಜನೆಂಬ ಬಿರುದನ್ನು ಧರಿಸಿದ್ದ. ವಿಜಯಸೇನ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ. ಶೂರನೂ ಸಾಹಸಿಯೂ ಆಗಿದ್ದ ಈತ ಪಾಲರನ್ನೂ ನೆರೆಯ ರಾಜರನ್ನೂ ಸೋಲಿಸಿ ಬಂಗಾಲದ ಅತ್ಯಂತ ಬಲಿಷ್ಠ ದೊರೆಯೆನಿಸಿಕೊಂಡ. ಇವನು ಗೌಡ, ವಂಗ, ರಾಧಗಳ ಮೇಲೆ ಸಾರ್ವಭೌಮತ್ವವನ್ನು ಹೊಂದಿದ್ದನೆಂದು ಶಾಸನಗಳು ತಿಳಿಸುತ್ತವೆ. ಇವನು ಕನೂಜಿನ ಮೇಲೆ ದಾಳಿ ನಡೆಸಿದ. ಕಳಿಂಗ ರಾಜನನ್ನು ಸೋಲಿಸಿ ಬಂಗಾಲದಲ್ಲಿ ಅಪ್ರತಿಮನಾಗಿ ಮೆರೆದ. ಪೂರ್ವಗಂಗರ ಅನಂತವರ್ಮ ಜೋಡಗಂಗನೊಡನೆ ಮೈತ್ರಿ ಬೆಳೆಸಿದ. ಈತ ಅರಿರಾಜವೃಷಭಸಂಕರನೆಂಬ ಬಿರುದನ್ನು ಹೊಂದಿದ್ದ. ಇವನು ದೇವಷಾರದಲ್ಲಿ ಪ್ರದ್ಯುಮ್ನೇಶ್ವರ ದೇವಾಲಯವನ್ನು ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ. ಇವನ ರಾಣಿ ವಿಲಾಸದೇವಿ ರಾಜಧಾನಿ ವಿಕ್ರಮಪುರದಲ್ಲಿ ಕನಕತುಲಾಪುರುಷ ಮಹಾದಾನ ಮಾಡಿದಳು. ಇವನ ವಿಸ್ತಾರವಾದ ರಾಜ್ಯಕ್ಕೆ ರಾಧ, ಗೌಡಪುರ, ವಿಕ್ರಮಪುರ ಎಂಬ ಮೂರು ರಾಜಧಾನಿಗಳಿದ್ದುವು. ಸ್ವತಃ ವಿದ್ವಾಂಸನಾಗಿದ್ದ ಈತ ಅನೇಕ ಕವಿಗಳಿಗೆ ಪೋಷಣೆ ನೀಡಿದ್ದ.

	ಹನ್ನೆರಡನೆಯ ಶತಮಾನದಲ್ಲಿ ಆಳಿದ ಲಕ್ಷ್ಮಣಸೇನ ಈ ಸಂತತಿಯ ಮತ್ತೊಬ್ಬ ಪ್ರಖ್ಯಾತ ದೊರೆ. ಇವನು ಮಹಾಪರಾಕ್ರಮಿಯೂ ಯೋಧನೂ ಆಗಿದ್ದು ಗೌಡ ಮೊದಲಾದ ರಾಜ್ಯಗಳ ಮೇಲೆ ಯುದ್ಧಮಾಡಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ. ಜಯಚಂದ್ರನನ್ನು ಸೋಲಿಸಿ ಗಹಡವಾಲರನ್ನು ಹಿಂದಕ್ಕೆ ಅಟ್ಟಿದ. ಪ್ರಾಗ್ಜೋತಿಷ ಅಥವಾ ಕಾಮರೂಪವನ್ನೂ ಕಳಿಂಗ ಮತ್ತು ಕಾಶಿಯನ್ನೂ ಗೆದ್ದು ಪುರಿ, ಕಾಶಿ ಮತ್ತು ತ್ರೀವೇಣಿಗಳಲ್ಲಿ ವಿಜಯ ಸ್ತಂಭಗಳನ್ನು ಸ್ಥಾಪಿಸಿದ. ಈತ ತನ್ನ ದಿಗ್ವಿಜಯಗಳಿಗೆ ಪ್ರಸಿದ್ಧನಾಗಿರುವಂತೆಯೇ ಸಾಹಿತ್ಯ ಪೋಷಕನಾಗಿಯೂ ಖ್ಯಾತನಾಗಿದ್ದಾನೆ. ಇವನ ಆಸ್ಥಾನದಲ್ಲಿ ಪವನದೂತ ಕೃತಿ ರಚಿಸಿದ ದೋಯಿ ಮತ್ತು ಗೀತಗೋವಿಂದ ಬರೆದ ಜಯದೇವ ಮೊದಲಾದ ಕವಿಗಳಿದ್ದರು.

	ಶೈವಧರ್ಮೀಯರಾಗಿದ್ದ ಸೇನರು ಸದಾಶಿವ ಮೊದಲಾದ ಸುಂದರ ಶೈವಮೂರ್ತಿಗಳನ್ನು ನಿರ್ಮಿಸಿದರು. ಪೂರ್ವ ಬಂಗಾಲದಲ್ಲಿ ಜನಪ್ರಿಯವಾಗಿರುವ ನಟರಾಜ ಮೂರ್ತಿ ಸೇನರ ಪ್ರಮುಖ ಕೊಡುಗೆ. ಕೊಡ ಹೊತ್ತು ಕಲ್ಪವೃಕ್ಷದ ಕೆಳಗೆ ನಿಂತಿರುವ ಗಂಗೆಯ ವಿಗ್ರಹವೂ ಸೇನರ ಅತ್ಯುತ್ಕøಷ್ಟ ಮೂರ್ತಿಶಿಲ್ಪ. ಚಿತ್ರಕಲೆಗೂ ಇವರು ನೀಡಿದ ಕೊಡುಗೆ ಗಮನಾರ್ಹವಾದುದು.	
											(ಎಸ್.ಎಮ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ